Tuesday, June 5, 2007

ಚಿಟ್ಟೆಯಂತೆ ಹಾರಿತು ಮನವು

ಮೊನ್ನೆ ಮನೆಗೆ ಹೋದ ದಿನ ಬೆಳಿಗ್ಗೆ ಅಪ್ಪ ಅದಾಗಲೇ ನಮ್ಮ ಬರುವು ಹಾಯುತ್ತಾ ಗೇಟ್ ಬಳಿ ನಿಂತಿದ್ದರು. ಆಟೋ ಸದ್ದು ಕೇಳಿ ಹೊರ ಬಂದ ಅಮ್ಮನಿಗೆ ಆಶ್ಚರ್ಯ, ಸಂತೋಷ ಎಲ್ಲ ಒಟ್ಟೊಟ್ಟಿಗೆ, ನಾನು ಬರುವುದು ಗೊತ್ತಿತ್ತು. ಅಕ್ಕ ನನ್ನೊಡನೆ ಬರುವುದನ್ನು ಹೇಳಿರಲಿಲ್ಲ. ಅಮ್ಮನಿಗೆ surprise ಇರಲಿ ಅಂತ ಅಕ್ಕನೆ ಹೇಳಿದ್ದು. ಅಪ್ಪ ಅಮ್ಮ ಇಬ್ಬರೇ ಇದ್ದು ಶಾಂತವಾಗಿದ್ದ ಮನೆಗೆ ನಾವಿಬ್ಬರು ಹೊಕ್ಕಿದ್ದೆ ಏನೋ ಬೇರೆಯೇ ಕಳೆ ಬಂದಂತಾಯಿತು. ನಗು ಮಾತು ತಮಾಷೆ, ಅಮ್ಮನ ಉಪಚಾರಗಳ ನಡುವೆ ಸಮಯ ಹೋಗಿದ್ದೆ ತಿಳಿಯಲಿಲ್ಲ.

ಸಂಜೆ ಮನೆಯಲ್ಲಿ ನಾನು ಅಮ್ಮ ಇಬ್ಬರೇ. ಅಮ್ಮ ಯಾರೊಂದಿಗೊ ಮಾತುಕತೆ ನಡೆಸಿದ್ದಳು. ನಾನು ಸುಮ್ಮನೇ ಹೊರ ನಡೆದೆ. ನಮ್ಮನೆ ಕೆಳಗಿನ ಹಿತ್ತಲಿನ ಕೆಳಗಿನ ಪುಟ್ಟ ತೋಟದಲ್ಲಿ ಸಂಜೆ ಅಡ್ದಾಡುವುದೆಂದರೆ ಅದೇನೋ ಖುಷಿ. ಅಷ್ಟೆತ್ತರಕ್ಕೆ ಬೆಳೆದು ನಿಂತ ಬಾಳೆ ಗಿಡಗಳು, ನಡುವಲ್ಲೆಲ್ಲ ಅಲ್ಲಲ್ಲಿ ಕಾಫಿ ಸಸಿಗಳು. ಸಸಿಗಳಾ ಅವು? ಮೊನ್ನೆ ಮೊನ್ನೆ ನೆಟ್ಟಂಥ ನೆನಪು. ಆಗಲೇ ನನ್ನ ಎರಡರಷ್ಟು ಎತ್ತರ ಬೆಳೆದ ಗಿಡಗಳಾಗಿವೆ. ಹೋದ ಸಲ ಮನೆಗೆ ಬಂದಾಗ ನಾನು, ಅಪ್ಪ ಕಾಫಿ ಬೀಜ ಕೊಯ್ದಿದ್ದು ನೆನಪಾಯ್ತು. ಹಿಂದಿನ ಸಲ ನೋಡಿದಾಗ ಬೇಸಿಗಯೆ ಬಿರು ಬಿಸಿಲಿಗೆ ಒಣಗಿದ್ದ ನೆಲ ಬಿದ್ದ 4-6 ಮಳೆಗೆ ಹುಲ್ಲು, ಅವು ಇವು ಕಳೆ ಸಸಿಗಳಿಂದ ಕೂಡಿ ಹಸಿರಾಗಿತ್ತು. ಅಲ್ಲೆಲ್ಲ ಓಡಾಡಿದೆ. ಮನಸ್ಸಿಗೆ ಹಿತವೆನಿಸಿತು.

ಅಷ್ಟೇ ಒಂದು ಕ್ಷಣದಲ್ಲಿ ಛಕ್ಕನೆ ಚಿಟ್ಟೆಯೊಂದು ನನ್ನ ಕಣ್ಣು ಸೆಳೆಯಿತು. ಮೈಯೆಲ್ಲ ಕಪ್ಪು ಬಣ್ಣ, ರೆಕ್ಕೆಯ ಅಂಚಿನಲ್ಲಿ ಹಳದಿ ಬಣ್ಣದ ಚಿತ್ತಾರಗಳಿದ್ದ ಚಿಟ್ಟೆ ತುಂಬಾ ಸುಂದರವಾಗಿತ್ತು. ನಾನು ಅಕ್ಕ ಚಿಟ್ಟೆ ಹಿಡಿಯಲು ಅಲ್ಲೆಲ್ಲ ಓಡುತ್ತಿದ್ದ್ದ ದಿನಗಳು ಕಣ್ಮುಂದೆ ತೇಲಿ ಹೋದವು. ಮತ್ತೆ ಅತ್ತಿತ್ತ ತಿರುಗಿ ಚಿಟ್ಟೆಯನ್ನು ಹುಡುಕಿದೆ. ಅಬ್ಬಾ ಅದೆಷ್ಟು ಚಂಚಲ ಚಿಟ್ಟೆ!!! ಒಂದು ಕಡೆ ಕೂರುತ್ತಿಲ್ಲ ಒಂದು ನಿಮಿಷ ಕೂಡ. ಇತ್ತ ಹಾರಿ ಅತ್ತ ಹಾರಿ ನೋಡ ನೋಡುವಷ್ಟರಲ್ಲಿ ಮತ್ತೆಲ್ಲೋ ಹಾರಿಹೋಗಿಯಾಗಿತ್ತು. ನಂಗೆ ಚಿಟ್ಟೆಯದೊಂದು ಫೋಟೋ ತೆಗೆಯೋ ಮನಸ್ಸಾಯಿತು.ಚಿಟ್ಟೆಯನ್ನ ಅಟ್ಟಿಸಿಕೊಂಡು ಹೋದೆ. ಅದು ಹಾರಿದಲ್ಲೆಲ್ಲ ನಾನು ಓಡಿ ಓಡಿ ಹೋದೆ. ಉಹೂಂ ಚಿಟ್ಟೆ ತನ್ನ ಚಾಂಚಲ್ಯತೆಯ ಪ್ರದರ್ಶನ ಮಾಡುತ್ತಲೇ ಇತ್ತು. ಮತ್ತೆ ಮತ್ತೆ ಹುಡುಕಿದೆ ಚಿಟ್ಟೆಗಾಗಿ. ಮೂಲೆಯೊಂದರ ಗಿಡದ ಮೇಲೆ ಮೂರು ಚಿಟ್ಟೆಗಳು ಹಾರುತ್ತಿದ್ದವು. ಆಹಾ ಎಂದುಕೊಂಡು ಮತ್ತೆ ಅತ್ತ ಓಡಿದೆ. ಅವೆಲ್ಲ ಆಗಲೇ ಹಾರಿ ಹಾರಿ ಒಂದೊಂದು ದಿಕ್ಕಿಗೆ ಚದುರಿದವು.

ಪಕ್ಕದ ಗಿಡದ ಮೇಲೆ ಅರ್ಧ ರೆಕ್ಕೆ ಹರಿದಿದ್ದ ಚಿಟ್ಟೆ ರೆಸ್ಟ್ ತೆಗೆದುಕೊಳ್ಳುತ್ತಿತ್ತು. ಸಮಯ ಸಾಧಿಸಿ ಫೋಟೋ ಕ್ಲಿಕ್ಕಿಸಿದೆ. ನಾನು ಮಾಡಿದ ಸದ್ದಿಗೆ ಅದಾಗಲೇ ಅಲ್ಲಿಂದ ಹಾರಿಯಾಗಿತ್ತು. ಮತ್ತೆ ಸ್ವಲ್ಪ ಹೊತ್ತು ಬಾಳೆ ಗಿಡಗಳ ನಡುವಲ್ಲೆಲ್ಲ ಓಡಾಡಿದೆ. ಕಾಫಿ ಗಿಡಗಳ ಎಲೆ ಸವರಿದೆ. ಚಿಟ್ಟೆಗಳ ಗುಂಗು ಇನ್ನೂ ತಲೆಯಲ್ಲಿ ಹಾರಾಡುತ್ತಿತ್ತು. ಮತ್ತೊಮ್ಮೆ ಹಿಂದೆ ದೃಷ್ಟಿ ಹಾಯಿಸಿದಾಗ ಗಿಡವೊಂದರ ಮೇಲೆ 2 ಚಿಟ್ಟೆಗಳು ಕುಳಿತಿದ್ದು ಕಾಣಿಸಿತು. ನಿಧಾನವಾಗಿ ಹೋಗಿ ಇನ್ನೊಂದು ಫೋಟೊ ಕ್ಲಿಕ್ಕಿಸಿದೆ. ಮತ್ತೊಂದು ಫೋಟೋ ತೆಗೆಯುವ ಆಸೆಯಿಂದ ಇನ್ನೊಂದು ಹೆಜ್ಜೆ ಮುಂದಿಟ್ಟೆ. ಕೈಗೆ ಸೋಳ್ಳೆಯೊ ಏನೋ ಕಚ್ಚಿದಂತಾಗಿ ಕೈ ನಡುಗಿತು. ಗಿಡ ಅಲುಗಾಡಿ ಚಿಟ್ಟೆಗಳೆರಡೂ ನನ್ನ ಮುಖಕ್ಕೆ ಎರಗಿದಂತೆ ಹಾರಿದವು. ಭಯದಿಂದ ನಾನೂ ಅಷ್ಟೆತ್ತರಕ್ಕೆ ಹಾರಿದೆ. ಉಸಿರು ಬಿಗಿ ಹಿಡಿದು ಕಣ್ಣುಗಳೆರಡನ್ನೂ ಗಟ್ಟಿಯಾಗಿ ಮುಚ್ಚಿದ್ಡೆ. ಕಣ್ಣು ಬಿಟ್ಟು ಚಿಟ್ಟೆಗಳು ಹಾರಿದತ್ತ ನೋಡಿ ನನ್ನ ಪುಕ್ಕಲುತನಕ್ಕೆ ನಾನೇ ನಗುತ್ತಾ ಅಲ್ಲೇ ಇದ್ದ ಮಣ್ಣಿನ ಮೆಟ್ಟಿಲ ಮೇಲೆ ಕುಳಿತೆ.

ಅಲ್ಲೆಲ್ಲ
ಇನ್ನೂ ಎಷ್ಟೋ ಪುಟಾಣಿ ಕೆಂಪು ಹಳದಿ ಬಣ್ಣದ ಚಿಟ್ಟೆಗಳು ಹಾರುತ್ತಿದ್ದವು. ಎಲ್ಲವನ್ನೂ ಓಡಿ ಹೋಗಿ ಬಾಚಿ ಹಿಡಿಯುವ ಮನಸ್ಸಾಯಿತು. ನನ್ನ ಹಿಂದುಗಡೆ ಇದ್ದ ಜೋಡು ಹಲಸಿನ ಮರದ ಕಾಯಿಗಳೆಲ್ಲ ನನ್ನನ್ನೇ ನೋಡಿ ನಕ್ಕಾಂತಯಿತು. ಆಗಲೇ ಪಟ ಪಟನೆ ಮಳೆಯ ತುಂತುರು ಹನಿಗಳು ಉದುರಲು ಶುರುವಾಯಿತು. ಮೇಲುಗಡೆಯಿಂದ ಅಮ್ಮ ನನ್ನನ್ನು ಕೂಗುತ್ತಿದ್ದಿದ್ದು ಕೇಳಿಸಿತು. " ಮುಸ್ಸಂಜೆ ಹೊತ್ತು ಅಲ್ಲೇನು ಮಾಡ್ತಿದೀಯಾ. ಮೇಲೆ ಬಾ".... ಮೇಲೆ ಹೋಗಲು ಮನಸ್ಸಾಗಲಿಲ್ಲ. ಅಲ್ಲೇ ಇನ್ನೂ ಸ್ವಲ್ಪ ಹೊತ್ತು ಕೂರುವ ಮನಸ್ಸಿತ್ತು. ಅಮ್ಮ ಇನ್ನೂ ಕರೆಯುತ್ತಲೇ ಇದ್ದಳು "ಶಾಮು ಏಯ ಶಾಮು"..... ಒಲ್ಲದ ಮನಸ್ಸಿನಿಂದ ಎದ್ದು ಹೊರಟೆ. ಆದರೆ ನನ್ನ ಮನಸ್ಸು ಇನ್ನೂ ಅಲ್ಲೇ ತೋಟದ ನಡುವಲ್ಲೆಲ್ಲೋ ಚಿಟ್ಟೆಯಂತೆ ಹಾರುತ್ತಲೇ ಇತ್ತು....

9 comments:

Sandeepa said...

ನಾನು ವರ್ದಳ್ಳಿ ಗುಡ್ಡದ್ ಮೇಲೆ ಕ್ಯಾಮ್ರಾ ಹಿಡ್ಕಂಡ್ ಬರೀಕಾಲಲ್ ಓಡಿದ್ ನೆನ್ಪಾತು. ಅದೂ ಮಧ್ಯಾಹ್ನ ಮೂರ್ ಗಂಟಿಗೆ.. ಬರೀ ಕಾಲಲ್ಲಿ..

ಫೋಟೊ ಮನೆಲ್ಲಿದ್ದು. ಹೋದ್ಮೇಲೆ ನೆನ್ಪಾದ್ರೆ ಬ್ಲಾಗಿಗ್ ಹಾಕವು.

btw..
ಎಲ್ಲೋ ಹೋಗ್ಬುಟಿ,
ಇನ್ನು ೨ ದಿನ ಮೊದ್ಲೇ ಎಂತಾರು ಬರೀತ್ಯೇನ ಅಂತ ಕಾಯ್ತಿದ್ದಿದ್ದಿ.

Anonymous said...

ಶ್ಯಾಮಾ,
"ಪಾತರಗಿತ್ತಿ ಪಕ್ಕ, ನೋಡಿದೇನೆ ಅಕ್ಕ"
ನೆನಪಾತು.
ಲೇಖನ ಚನ್ನಾಗಿ ಇದ್ದು.
ಊರಿಗೆ ಹೋಗಿ ಬಂದ್ರೆ ಒಂದು ಪ್ರವಾಸ ಕಥನ ಬರಿಯನ ಅನ್ನಿಸ್ತು. ಊರಲ್ಲೆ ಇರುವಾಗ ಅತೀ ಸಮಾನ್ಯ ಅನ್ನಿಸೋ ಎಷ್ತೋ ವಿಷಯಗಳು ಈಗ ಹೋದಾಗ ಅದ್ಭುತ ಅನ್ನಿಸ್ತು ಅಲ್ದಾ?
ಫೋಟೊ ತೆಗದಿ ಹೇಳದೆ ಇಲ್ಲಿ ಅಪ್ ಲೋಡ್ ಮಾಡ್ಲಕಾಗಿತ್ತು ನಾನು ಒಂಚುರು ನೋಡಿ ಖುಶಿ ಪಡ್ತಿದ್ದಿ.

Shree said...

ನೀವು ಚೆನ್ನಾಗಿ ಬರೆಯುತ್ತೀರ. ಕಾಗುಣಿತ ದೋಷಗಳನ್ನು ಸರಿಪಡಿಸಿಕೊಂಡರೆ ಇನ್ನೂ ಚೆನ್ನಾಗಿರ್ತದೆ. ಗಟ್ಟಿ ವಿಷಯಗಳನ್ನು ಆಯ್ಕೆ ಮಾಡಿಕೊಂಡರೆ ಮತ್ತೂ ಚೆನ್ನಾಗಿರ್ತದೆ.

Jagali bhaagavata said...

ಪರ್ವಾಗಿಲ್ಲ. ಚೆನ್ನಾಗಿದೆ. ಬೇಂದ್ರೆ ಕವಿತೆ ಕೇಳಿದ್ಯಾ - 'ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ...'. ಚಿಟ್ಟೆ, ದುಂಬಿ ಎಲ್ಲ ಚಂಚಲತೆಯ ಸಂಕೇತ. ನಮ್ಮ ಕಲ್ಪನೆಗಳೂ ಚಿಟ್ಟೆಯ ಹಾಗೆ, ದುಂಬಿಯ ಹಾಗೆ ಕೂತಲ್ಲಿ ಕೂರಲ್ಲ, ನಿಂತಲ್ಲಿ ನಿಲ್ಲಲ್ಲ. ನಿರಂತರವಾದ ಚಲನಶೀಲತೆಯೇ ಸ್ಥಾಯಿಯಾಗಿರತ್ತೆ.

ಇಷ್ಟ ಆಗೋದನ್ನ ಬರೀತಾ ಇರು. ಗಟ್ಟಿ ತೆಳುವಿನ ತಲೆಬಿಸಿ ಸದ್ಯ ಬೇಡ. ಚಿಟ್ಟೆಗಳ ಫೋಟೋ ಎಲ್ಲಿ?

ಶ್ಯಾಮಾ said...
This comment has been removed by the author.
ಶ್ಯಾಮಾ said...

@ alpazna
2 ದಿನ ಮೊದಲೇ ಎಂತಕ್ಕೆ ಕಾಯ್ತಾ ಇದ್ದಿದ್ದೆ? ಏನೋ ಕೆಲ್ಸದ ಮಧ್ಯ ಬಿಡುವು ಮಾಡ್ಕ್ಯಂದು ಬರೆಯಷ್ಟೊತ್ತಿಗೆ 2 ದಿನ ತಡ ಆತು :)

@ ranju

ಹೌದು ರಂಜು ಊರಿಗೆ ಹೋದಾಗ ಅತಿ ಚಿಕ್ಕ ಪುಟ್ಟ ವಿಷಯಗಳು ಮನಸ್ಸಲ್ಲಿ ಎಷ್ಟು ಅಚ್ಚೊತ್ತಿಬಿಡ್ತು ಅಂದ್ರೆ ಬರೀತ ಹೋದ್ರೆ ಅದಕ್ಕೆ ಕೊನೇ ನೇ ಇಲ್ಲೇ... ಅದಕ್ಕೆ ಮನೆಗೆ ಹೋಗೋದು ಅಂದ್ರೆ ಇಷ್ಟ ಅತಿ ಚಿಕ್ಕ ಚಿಕ್ಕ ಸಂತೋಷಗಳನ್ನ ಎಂಜೋಯ್ ಮಾಡಬಹುದು

@ shree

ನೆನಪಿನಂಗಳಕ್ಕೆ ಸ್ವಾಗತ... ನಿಮ್ಮ ಸಲಹೆ ಅಭಿಪ್ರಾಯಗಳಿಗೆ ಧನ್ಯವಾದಗಳು, ಹೀಗೆ ಓದಿ ಸಲಹೆ ಕೋಡೋದಕ್ಕೆ, ಮೆಚ್ಚಿಕೊಳ್ಳೋದಕ್ಕೆ( :-) ) ಆಗಾಗ ಭೇಟಿ ಕೊಡ್ತಾ ಇರಿ

ಶ್ಯಾಮಾ said...

@ Jagali Bhagavata

ನಿಮ್ಮ comment ಓದಿ ಖುಷಿ ಆಯ್ತು... ಚಿಟ್ಟೆ ಫೋಟೋ ಗೆ ಕಾಯ್ತಾ ಇರಿ.. ಜಾಸ್ತಿ ಕೇಳಿದಷ್ಟು ಜಾಸ್ತಿ ಲೇಟ್ ಆಗೋ ಸಾಧ್ಯತೆ ಹೆಚ್ಚು :) :)

ಯಜ್ಞೇಶ್ (yajnesh) said...

ಲೇಖನ ಓದಿದಾಗ ಓಮ್ಮೆ ಮನೆ ನೆನಪಾತು. ಚೆನ್ನಾಗಿ ಬೈಂದು. ತೆಗೆದ ಫೋಟೋಗಳನ್ನಿ ಇಲ್ಲಿ ಹಾಕಿದ್ರೆ ಇನ್ನು ಚೆನ್ನಾಗಿರ್ತು ಅನಿಸ್ತು

ಶ್ಯಾಮಾ said...

@ ಯಜ್ಞೇಶ್
ನೆನಪಿನಂಗಳಕ್ಕೆ ಸ್ವಾಗತ,

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಹೀಗೆ ಬರ್ತಾ ಇರಿ,
ಫೋಟೋ ಹಾಕ್ತಿ ಸದ್ಯದಲ್ಲೇ :)