Wednesday, October 24, 2007

ಅರ್ಥವಾಗದವನು

ರಾತ್ರಿಗತ್ತಲಿಗೆ ಭಯವಿದ್ದಾಗ ನನ್ನಲ್ಲಿ
ಮುಖ ಮುಚ್ಚಿದ್ದ ನನ್ನ
ಕೈಗಳನ್ನು ಕೆಳಗಿಳಿಸಿ
ನನ್ನ ಗಲ್ಲವನ್ನೆತ್ತಿ
ಬಾನಿನಲ್ಲಿ ಹೊಳೆ ಹೊಳೆಯುತ್ತಿದ್ದ
ಚುಕ್ಕಿಗಳ ತೋರಿಸಿ,ನಗಿಸಿ
ಕತ್ತಲೆ ಎಂದರೆ ಇದ್ದ ಭಯವನ್ನೋಡಿಸಿ
ನನ್ನಲ್ಲಿ ಚುಕ್ಕಿ ಎಣಿಸುವ
ಹುಚ್ಚು ಹಿಡಿಸಿದವನು
ಇಂದು, ಬಾ ಚುಕ್ಕಿ ಹರಡಿ
ಚಿತ್ತಾರವಾಗಿರುವ ಬಾನ ಕೆಳಗೆ
ಕೂತು ಮಾತಾಡೋಣವೆಂದರೆ
"ನನಗೆ ಕೋಟಿ ಚುಕ್ಕಿಗಳ
ನಡುವೆ ಒಂದಾಗಿ ನಿನ್ನ
ಕಣ್ಣೊಳಗೆ ಕಳೆದು ಹೋಗುವೆನೆಂಬ ಭಯವಿದೆ" ಎಂದ

ನಾನಂದು ಹಾದಿ ತಪ್ಪಿ ಹೋಗಿ
ಬೆದರಿ ಕೈಚೆಲ್ಲಿ ಸೋತು
ಕುಳಿತಿದ್ದಾಗ
ಕೈ ಹಿಡಿದು ಮೆಲು ನಕ್ಕು
ದೂರದಲ್ಲೆಲ್ಲೋ ಹರವಿಕೊಂಡಿದ್ದ
ನನ್ನ ಕನಸುಗಳ ತೋರಿಸಿ
ಗುರಿ ಕಾಣಿಸುತ್ತಿರುವಾಗ ದಾರಿ
ತಪ್ಪುವುದುಂಟೆ?
ಮುನ್ನಡೆಯಬೇಕು ನೀನು
ಅವುಗಳ ಬಳಿ ಸೇರುವವರೆಗೆ
ಎಂದವನು ಇಂದು,
ಬಾ ನನ್ನೊಡನೆ
ಕನಸುಗಳಿಗೆ ಬಣ್ಣ
ಹಚ್ಚೋಣ ಎಂದರೆ
"ನನಗೆ ಕನಸುಗಳೇ ಇಲ್ಲ " ಎಂದ.

ಪ್ರತಿ ಹೆಜ್ಜೆಯಲ್ಲೂ ಎಡವುವೆನೆಂಬ
ಭಯವಿದ್ದಾಗ ನನ್ನಲ್ಲಿ ಅಂದೊಮ್ಮೆ
ಧೈರ್ಯ ತುಂಬುತ್ತಾ
ಎಡವಿದಾಗ ನನ್ನೆತ್ತಿ ಮುನ್ನಡೆಸಿ,
ನನ್ನೊಡನೆ ಜೊತೆಯಾಗಿ ಹೆಜ್ಜೆ ಹಾಕುವ
ಭರವಸೆಯಿಡುತ್ತಾ
ನಿನ್ನೊಡನೆ ನಾನಿದ್ದೇನೆ ಸದಾ ಎಂದವನು ಇಂದು,
ಕವಲೊಡೆದ ದಾರಿಯಲ್ಲಿ ನಾ ನಿಂತು
ಒಂಟಿತನದ ಭೀತಿ ಕಾಡಿ ಬಿಕ್ಕಳಿಸುವಾಗ
"ಸಮಯಗಳ ಸರಪಳಿಯಲ್ಲಿ ಬಂಧಿ ನಾನು" ಎಂದ.

5 comments:

Sandeepa said...

ಅದ್ಭುತ!

ಮನಸ್ವಿನಿ said...

ತುಂಬಾ ಚೆನ್ನಾಗಿದೆ

ರಂಜನಾ ಹೆಗ್ಡೆ said...

ಮಸ್ತ್ ಆಗಿ ಇದ್ದು ಕವನ.
ಸುಪರ್..........

ಅರ್ಥ ಆಗದವನನ್ನ ಮತ್ತೆ ಮತ್ತೆ ಅರ್ಥ ಮಾಡಿಕೊಳ್ಳಕೆ ಟ್ರೈ ಮಾಡಕೆ ಹೋಗಡ ಲೈಫ್ ಸಿಕ್ಕಾಪಟ್ಟೆ ಕನ್ ಪ್ಯೂಸ್ ಆಗಿ ಹೋಕ್ತು ಅಷ್ಟೆ.ಈ ತರ ಒಗಟಾಗಿ ಮಾತಾಡವರನ್ನೆಲ್ಲಾ ನಂಬಡ ಕೂಸೆ ಸಾದ ಸೀದಾ ಇರ್ತ್ವಲ್ಲಾ ಅವರನ್ನ ನಂಬು ಕೂಸೆ.

ಶ್ಯಾಮಾ said...

@ sandeepa ,ಮನಸ್ವಿನಿ , ರಂಜನಾ

ಧನ್ಯವಾದಗಳು..

@ ರಂಜನಾ

ಸರಿ ಕೂಸೆ.. ನಿನ್ನ ಅಡ್ವೈಸ್ ಸರಿ ಇದ್ದು.......... ಟೈಮ್ ಬಂದಾಗ ನೀ ಹೇಳಿದ್ ಹಂಗೆ ಮಾಡ್ತಿ :)

Vijaya said...

I just adore your feelings!
Thanks